ಆಲಿಫಾಂಟ್, ಮಾರ್ಗರೆಟ್

(1828-1897) ಇಂಗ್ಲೆಂಡಿನ ಲೇಖಕಿ. ಕಾದಂಬರಿ, ಜೀವನಚರಿತ್ರೆ ಬರೆದಿದ್ದಾಳೆ. 1857ರಲ್ಲಿ ಫ್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. 1849ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ, ಕರುಣ, ಪಾತ್ರರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದ್ದಾಳೆ. ಅವಸರದಿಂದ ಬರೆಯುತ್ತಿದ್ದುದರಿಂದ ಶೈಲಿ, ವಸ್ತುನಿರೂಪಣೆಗಳಲ್ಲಿ ಅನೇಕ ದೋಷಗಳು ಕಂಡುಬರುತ್ತವೆ. ದಿ ಕ್ರಾನಿಕಲ್ಸ್ ಆಫ್ ಕಾರ್ಲಿಂಗ್ ಫರ್ಡ್ (1861-5), ದಿ ಮಿನಿಸ್ಟರ್ಸ್ ವೈಪ್ (1869), ಎಫಿ ಆಗಿಲ್ವಿ (1886), ಕರ್ಸಟೀನ್ (1890), ಎ ಬಿಲೀಗರ್ಡ್ ಸಿಟಿ (1880), ಎ ಲಿಟಲ್ ಪಿಲ್‍ಗ್ರಿಂ ಇನ್ ದಿ ಅನ್‍ಸೀನ್ (1882), ಎಂಬ ಕಾದಂಬರಿಗಳನ್ನೂ ಸ್ಕೆಚಸ್ ಆಫ್ ದಿ ರೇನ್ ಆಫ್ ಜಾರ್ಜ್ II (1869), ದಿ ಮೇಕರ್ಸ್ ಆಫ್ ಫ್ಲಾರೆನ್ಸ್ (1876), ಲಿಟರೆರಿ ಹಿಸ್ಟರಿ ಆಫ್ ಇಂಗ್ಲೆಂಡ್ 1790-1825 (1882), ರಾಯಲ್ ಎಡಿನ್ಬರೊ (1890), ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ, ಎಡ್ವರ್ಡ್ ಇರ್ವಿಂಗ್ - ಇವೇ ಮುಂತಾದ ಜೀವನಕಥೆಗಳನ್ನೂ ಜೀವನ ಚರಿತ್ರೆಗಳನ್ನೂ ಈಕೆ ಬರೆದಿದ್ದಾಳೆ. 						
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ